ಕಾರ್ಮಿಕರ ಸಂಘಟನೆ ಮೇಲಿನ ಆರೋಪ ಸತ್ಯಕ್ಕೆ ದೂರ: ಸುಂದರ್ ಬಾಬು.
ರಿಪ್ಪನ್‌ಪೇಟೆ: ಅಖಿಲ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ವಿರುದ್ಧ ಕೇಳಿಬಂದಿರುವ ಲೇಬರ್ ಕಾರ್ಡ್‌ಗಾಗಿ ಹೆಚ್ಚುವರಿ ಹಣ ವಸೂಲಿ ಹಾಗೂ ಇತರ ಆರೋಪಗಳು ನಿರಾಧಾರ ಎಂದು ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬು ಸ್ಪಷ್ಟಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಸಂಘವು ಕಾರ್ಮಿಕರ ಕಲ್ಯಾಣಕ್ಕಾಗಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ ಎಂದರು.

ಜಿಲ್ಲಾಧ್ಯಕ್ಷ ಸಂಜಯ್ ಅವರು ಆರೋಪಗಳಿಗೆ ಯಾವುದೇ ಸಾಕ್ಷ್ಯಾಧಾರಗಳಿದ್ದರೆ ಕಾನೂನು ಕ್ರಮ ಕೈಗೊಳ್ಳಬಹುದು, ಸಂಘವು ಯಾವುದೇ ತನಿಖೆಗೂ ಸಿದ್ಧವಿದೆ ಎಂದು ಹೇಳಿದರು. ತಾಲೂಕು ಗ್ರಾಮಾಂತರ ಅಧ್ಯಕ್ಷ ಮಹಮ್ಮದ್ ಹುಸೇನ್ ಕೂಡ ಆರೋಪಗಳನ್ನು ತಳ್ಳಿಹಾಕಿ, ಈ ಹಿಂದೆ ಸಂಘದ ಸಭೆಗಳಲ್ಲಿ ಏಕೆ ವಿಷಯ ಪ್ರಸ್ತಾಪಿಸಿಲ್ಲ ಎಂದು ಪ್ರಶ್ನಿಸಿದರು.

ಇದೇ ಸಂದರ್ಭದಲ್ಲಿ, ಶಸ್ತ್ರಚಿಕಿತ್ಸೆ ವೇಳೆ ಮೃತಪಟ್ಟ ಕೋಡೂರು ಶಾಖವಳ್ಳಿ ಗ್ರಾಮದ ಸುಮಾ ಅವರ ಕುಟುಂಬಕ್ಕೆ ಸಂಘದ ವತಿಯಿಂದ ಧನಸಹಾಯ ನೀಡಲಾಯಿತು. ರಿಪ್ಪನ್‌ಪೇಟೆ ಠಾಣೆಯ ಪಿಎಸ್ಐ ರಾಜುರೆಡ್ಡಿ ಅವರು ಮೃತರ ಪತಿಗೆ ಧನಸಹಾಯ ವಿತರಿಸಿದರು.








