ಹೊಸನಗರ: ಸಾಗರ
ತಾಲ್ಲೂಕಿನ ಪುರಾಣ ಪ್ರಸಿದ್ಧ ಅಮ್ಮನಘಟ್ಟ ಶ್ರೀ
ಜೇನುಕಲ್ಲಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ಭಕ್ತಿಭಾವ ಹಾಗೂ ಸಂಭ್ರಮದ ವಾತಾವರಣದಲ್ಲಿ ಅದ್ದೂರಿ ಚಾಲನೆ ದೊರೆತಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ಧಾರ್ಮಿಕ ವಿಧಿವಿಧಾನಗಳು, ಕಂಕಣಧಾರಣೆ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ದೂರದ ಊರುಗಳಿಂದಲೂ ಭಕ್ತರು ಆಗಮಿಸಿ ಶ್ರೀ ಜೇನುಕಲ್ಲಮ್ಮ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಕೆಪಿಸಿಸಿ ಸದಸ್ಯರಾದ ಶ್ರೀಯುತ ಕಲ್ಗೋಡು ರತ್ನಾಕರ್ ಅವರು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಅಮ್ಮನಘಟ್ಟ ದೇವಸ್ಥಾನ ಸಮಿತಿ ಸಂಸ್ಥಾಪಕ ಅಧ್ಯಕ್ಷರಾಗಿರುವ ರತ್ನಾಕರ್ ಅವರು ಹಲವು ವರ್ಷಗಳಿಂದ ದೇವಸ್ಥಾನದ ಅಭಿವೃದ್ಧಿ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿವಿಧ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಸಾಮಾಜಿಕ ಕಳಕಳಿಯೊಂದಿಗೆ ಸಾರ್ವಜನಿಕರಿಗೆ ನೆರವಾಗುತ್ತಿರುವ ಅವರು, ಮೆಗನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬರುವ ಬಡ ಹಾಗೂ ಸಂಕಷ್ಟದಲ್ಲಿರುವ ಜನರಿಗೆ ಶಸ್ತ್ರಚಿಕಿತ್ಸೆ, ಔಷಧಿ ಹಾಗೂ ವೈದ್ಯಕೀಯ ನೆರವು ದೊರಕಿಸುವ ನಿಟ್ಟಿನಲ್ಲಿ ಸಹಕಾರ ನೀಡಿರುವುದಾಗಿ ತಿಳಿದುಬಂದಿದೆ.

ಅದೇ ರೀತಿ ರೈತರ ಸಮಸ್ಯೆಗಳಿಗೆ ಸಂಬಂಧಿಸಿದ ಹಲವು ಹೋರಾಟಗಳಲ್ಲಿಯೂ ಅವರು ಭಾಗವಹಿಸಿದ್ದಾರೆ.

ಅಮ್ಮನಘಟ್ಟ ದೇವಸ್ಥಾನದ ಅಭಿವೃದ್ಧಿಯ ದೃಷ್ಟಿಯಿಂದ 108 ಮೆಟ್ಟಿಲುಗಳ ನಿರ್ಮಾಣ, ಪುಷ್ಕರಣಿ ಅಭಿವೃದ್ಧಿ, ಅನ್ನದಾಸೋಹದ ವ್ಯವಸ್ಥೆ ವಿಸ್ತರಣೆ, ಬೋರ್ವೆಲ್ ಮೂಲಕ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಹಾಗೂ ಭಕ್ತಾದಿಗಳ ಅನುಕೂಲಕ್ಕಾಗಿ ಹೊಸ ಶೌಚಾಲಯಗಳ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ.
ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವ ಮೂಲಕ ಸಾರ್ವಜನಿಕ ಹಿತಾಸಕ್ತಿಗೆ ಆದ್ಯತೆ ನೀಡಲಾಗಿದೆ.
ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಭಕ್ತರ ಅನುಕೂಲಕ್ಕಾಗಿ ವಿವಿಧ ವ್ಯವಸ್ಥೆಗಳನ್ನು ಮಾಡಲಾಗಿದೆ. ಜಾತ್ರೆಯು ಧಾರ್ಮಿಕ ಭಕ್ತಿ, ಗ್ರಾಮೀಣ ಸಂಸ್ಕೃತಿ ಹಾಗೂ ಸ್ಥಳೀಯ ಪರಂಪರೆಯ ಸಮ್ಮಿಲನವಾಗಿ ಕಂಗೊಳಿಸುತ್ತಿದೆ.
ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿ ಜಾತ್ರಾ ಮಹೋತ್ಸವದ ಕುರಿತು ಶ್ರೀಯುತ ಕಲ್ಗೋಡು ರತ್ನಾಕರ್ ಅವರು ಏನು ಹೇಳಿದ್ದಾರೆ ಎಂಬುದನ್ನು ಕೇಳೋಣ.






